ಭದ್ರಾ 1

	ಕರ್ನಾಟಕ ರಾಜ್ಯದ ಒಂದು ನದಿ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹರಿಯುತ್ತದೆ. ತುಂಗಭದ್ರಾ ನದಿಯ ಮೂಲನದಿಗಳಲ್ಲಿ ಒಂದು. ಮೂಡಿಗೆರೆ ತಾಲ್ಲೂಕಿನ ಕಳಸದಿಂದ ಸುಮಾರು 25 ಕಿಮೀ ಪಶ್ಚಿಮಕ್ಕೆ ಪಶ್ಚಿಮಘಟ್ಟದ ನೆತ್ತಿಯಲ್ಲಿರುವ ವರಾಹ ಪರ್ವತದ ಗಂಗಾಮೂಲ ಇದರ ಉಗಮ. ತುಂಗಾ ನದಿ ಹುಟ್ಟುವುದೂ ಇಲ್ಲಿಯೇ. ಉಗಮಸ್ಥಾನದಿಂದ ಕಳಸದವರೆಗೆ ಪೂರ್ವಾಭಿಮುಖವಾಗಿ ಹರಿದು, ಮುಂದೆ ಸಂಗಮೇಶ್ವರದ ಬಳಿಯಲ್ಲಿ ಉತ್ತರ ಈಶಾನ್ಯದಿಶೆಯಲ್ಲಿ ಖಾಂಡ್ಯ, ನರಸಿಂಹರಾಜಪುರಗಳ ಮೂಲಕ ಲಕ್ಕವಳ್ಳಿಯತ್ತ ಸಾಗುತ್ತದೆ. ಲಕ್ಕವಳ್ಳಿಯಿಂದ ಮುಂದೆ ಉತ್ತರಗಾಮಿಯಾಗಿ ಶಿವಮೊಗ್ಗ ಜಿಲ್ಲೆ ಪ್ರವೇಶಿಸಿ, ಭದ್ರಾವತಿ, ಹೊಳೆ ಹೊನ್ನೂರುಗಳ ಮೂಲಕ ಹರಿದು ಮುಂದೆ ಶಿವಮೊಗ್ಗದ ಈಶಾನ್ಯದಲ್ಲಿರುವ ಕೂಡಲಿಯ ಬಳಿ ತುಂಗಾನದಿಯನ್ನು ಕೂಡುತ್ತದೆ. ಈ ಸಂಯುಕ್ತ ನದಿ ತುಂಗಭದ್ರಾ (ನೋಡಿ- ತುಂಗಭದ್ರಾ) ಎಂಬ ಹೆಸರಿನಿಂದ ಮುಂದೆ ಸಾಗಿ ಕೃಷ್ಣಾನದಿಯನ್ನು ಸೇರುತ್ತದೆ.

	ಇದು ಹೆಚ್ಚು ಮಲೆನಾಡು ಪ್ರದೇಶದಲ್ಲೇ ಹರಿಯುವ ನದಿ. ಸಹಜವಾಗಿ ಅನೇಕ ಸಣ್ಣ ಪುಟ್ಟ ಝರಿಗಳು, ಹಳ್ಳಗಳು ಇದನ್ನು ಕೂಡುತ್ತವೆ. ಆನೆಬಿದ್ದಹಳ್ಳ ಭದ್ರಾನದಿಯ ಮುಖ್ಯ ಉಪನದಿ. ಮೂಡಿಗೆರೆ ತಾಲ್ಲೂಕಿನ ದಕ್ಷಿಣದಿಂದ ಬರುವ ಈ ಉಪನದಿ ಸಂಗಮೇಶ್ವರದಲ್ಲಿ ಭದ್ರಾನದಿಯನ್ನು ಸೇರುತ್ತದೆ. ಮುಂದೆ ಚಿಕ್ಕಮಗಳೂರು ತಾಲ್ಲೂಕಿನ ಜಾಗರ್ ಕಣಿವೆಯಿಂದ ಹರಿದುಬರುವ ಸೋಮವಾಹಿನಿ ಹೆಬ್ಬೆಯ ಬಳಿಯಲ್ಲಿ ಸೇರುತ್ತದೆ. ಲಕ್ಕವಳ್ಳಿಯಲ್ಲಿ ಕಲ್ಹತ್ತಗಿರಿ ಮತ್ತು ಕಲ್ಲು ದುರ್ಗದ ಹೊಳೆಗಳು ಭದ್ರಾನದಿಯನ್ನು ಕೂಡುತ್ತವೆ.

	ದಟ್ಟವಾದ ಕಾಡುಗಳಲ್ಲಿ ಹರಿಯುವುದರಿಂದ ತುಂಗಾನದಿಯ ನೀರಿನಷ್ಟು ಈ ನದಿಯ ನೀರು ಆರೋಗ್ಯಕರವಾಗಿಲ್ಲವೆಂದು ಹೇಳುವರು. ನದಿಯ ದಡಗಳು ತುಂಬ ಕಡಿದಾಗಿರುವುದರಿಂದ ಇದರ ನೀರನ್ನು ವ್ಯವಸಾಯಕ್ಕೆ ಉಪಯೋಗಿಸಲು ಅಷ್ಟಾಗಿ ಅನುಕೂಲವಾಗಿಲ್ಲ. ಆದರೂ ಈ ನದಿಗೆ ಸುಮಾರು 18 ಚಿಕ್ಕ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಬೆಂಗಳೂರು-ಶಿವಮೊಗ್ಗ ರಸ್ತೆ ಮಾರ್ಗದಲ್ಲಿ, ಬಾಳೆಹೊನ್ನೂರು ಮತ್ತು ಭದ್ರಾವತಿಗಳಲ್ಲಿ ಈ ನದಿಗೆ ಸೇತುವೆಗಳನ್ನು ಕಟ್ಟಿದ್ದಾರೆ. ಇತ್ತೀಚೆಗೆ ಲಕ್ಕವಳ್ಳಿ ಬಳಿ ನಿರ್ಮಿಸಿರುವ ಭದ್ರಾ ಅಣೆಕಟ್ಟು ಕರ್ನಾಟಕದ ಬೃಹತ್ ನೀರಾವರಿ ಯೋಜನೆಗಳಲ್ಲಿ ಒಂದು. ಇದರಿಂದ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿದೆ.

	ಭದ್ರಾವತಿ, ಲಕ್ಕವಳ್ಳಿ ಮತ್ತು ನರಸಿಂಹರಾಜಪುರ ಈ ನದಿಯ ದಡದಲ್ಲಿರುವ ದೊಡ್ಡ ಊರುಗಳು. ನದಿಯ ಉಗಮಸ್ಥಾನವಾದ ಗಂಗಾಮೂಲ, ನದಿಯ ಬಲದಂಡೆಯಲ್ಲಿರುವ ಕಳಸ, ಖಾಂಡ್ಯ ಇವು ಪವಿತ್ರ ಕ್ಷೇತ್ರಗಳು. ಎಡದಂಡೆಯಲ್ಲಿರುವ ಬಾಳೆಹೊನ್ನೂರು ಪ್ರಸಿದ್ಧ ವೀರಶೈವ ಕೇಂದ್ರ.

	ಭದ್ರಾಯೋಜನೆ: ಕರ್ನಾಟಕ ರಾಜ್ಯದ ವಿವಿಧೋದ್ದೇಶ ನೀರಾವರಿ ಯೋಜನೆಗಳ ಪೈಕಿ ಒಂದು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಎಂಬ ಸ್ಥಳದ ಬಳಿ ಭದ್ರಾನದಿಗೆ ಅಡ್ಡವಾಗಿ ಕಟ್ಟೆಯೊಂದನ್ನು ಕಟ್ಟಿ ಭದ್ರಾ ಜಲಾಶಯ ನಿರ್ಮಿಸಲಾಗಿದೆ. ಈ ಯೋಜನೆಯನ್ನು 1947ರಲ್ಲಿ ಆರಂಭಿಸಲಾಯಿತು. ಇದರ ಪ್ರಕಾರ ನಿರ್ಮಿಸಲಾದ ಕಲ್ಲುಗಾರೆಯ ಕಟ್ಟೆಯ ಎತ್ತರ ಸುಮಾರು 59 ಮೀ, ಉದ್ದ 440ಮೀ. 1115ಮೀ ಉದ್ದದ ಮಣ್ಣಿನ ಏರಿ ಇದೆ. ಜಲಾಶಯದ ಜಲಸಂಗ್ರಹಣ ಸಾಮಥ್ರ್ಯ ಸುಮಾರು 2 ಲಕ್ಷ ಘಮೀ. ನದಿಯ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಂದ ಚಿಕ್ಕಮಗಳೂರು. ಶಿವಮೊಗ್ಗ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಸುಮಾರು ಒಂದು ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿದೆ. ಬಲದಂಡೆ ನಾಲೆ ಸುಮಾರು 80 ಕಿಮೀ ದೂರ ಕೋಡುಮಾರ್ಗದ ಮೂಲಕ ಹರಿದು ಮುಂದೆ ಒಂದು ಸುರಂಗದ ಮೂಲಕ ಹಾದು ಉಬ್ರಾಣಿಗುಡ್ಡ ದಾಟುತ್ತದೆ. ಈ ಸುರಂಗಕ್ಕೆ ಉಬ್ರಾಣಿ ಸುರಂಗ ಎಂದು ಹೆಸರು. ಇದನ್ನು ದಾಟಿದ ಬಳಿಕ ನಾಲೆ ದಾವಣಗೆರೆ ಶಾಖೆ, ಮಲೆಬೆನ್ನೂರು ಶಾಖೆ ಎಂಬ ಎರಡು ಶಾಖೆಗಳಾಗುತ್ತದೆ.

	ಭದ್ರಾ ವಿದ್ಯುದ್ಯೋಜನೆ : ನದಿಯ ಎರಡೂ ದಂಡೆಗಳಲ್ಲಿ ತಲಾ ಒಂದರಂತೆ ಎರಡು ವಿದ್ಯುಜ್ಜನಕಗಳಿವೆ. ದಂಡೆಯ ಯಂತ್ರಾಗಾರದ್ದು ಫ್ರೌನ್‍ಸಿಸ್ ತಿರುಬಾನಿಯಿಂದ ಚಲಿಸುವ ವಿದ್ಯುಜ್ಜನಕ. ಬಲದಂಡೆಯ ಯಂತ್ರಾಗಾರದ್ದು ತಿರುಬಾರಿಯಿಂದ ನಡೆಯುವ ಮತ್ತೊಂದು ವಿದ್ಯುಜ್ಜನಕ ಈ ಎರಡೂ ವಿದ್ಯುಜ್ಜನಕಗಳಿಂದ 33 ಮೆಗಾವಾಟ್ ವಿದ್ಯುತ್ತು ಉತ್ಪತ್ತಿಯಾಗುತ್ತದೆ.
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ